ಅಕ್ಷರಗಣ

 ಮಾತ್ರಾಗಣ ಅಂಶಗಣಗಳಂತೆ ಅಕ್ಷರಗಣವೂ ಛಂದಸ್ಸಿನ ರಚನೆಯನ್ನು ಅಳೆಯುವ ಒಂದು ಮಾನ.  ಸಂಸ್ಕøತ ಲೌಕಿಕಛಂದಸ್ಸಿಗೆ ಸೇರಿದ ಅನೇಕಾನೇಕ ವೃತ್ತಗಳನ್ನು ಮೂರು ಮೂರು ಅಕ್ಷರಗಳಿಗೆ ಒಂದು ಗಣದಂತೆ ವಿಭಾಗಿಸಿ ಅಂಥ ಒಂದೊಂದು ಗಣದಲ್ಲಿನ ಲಘುಗುರುಗಳ ಲೆಕ್ಕಾಚಾರದಂತೆ ಅವಕ್ಕೆ ಬೇರೆ ಬೇರೆ ಹೆಸರಿಟ್ಟು ಆಯಾ ವೃತ್ತಜಾತಿಯನ್ನು ಗುರುತಿಸುತ್ತಾರೆ.

 ಸಂಸ್ಕøತ ಲೌಕಿಕಛಂದಸ್ಸಿಗೆ ಸೇರಿದ ವರ್ಣವೃತ್ತಗಳು ನಾಲ್ಕು ಬಗೆಯಾದವು; ಸಮಚತುಷ್ಪದಿ, ಅರ್ಧಸಮಚತುಷ್ಟದಿ, ವಿಷಮಚತುಷ್ಪದಿ ಮತ್ತು ದಂಡಕ.  ಇವುಗಳಲ್ಲಿ ವೃತ್ತಪಾದದ ಅಕ್ಷರಸಂಖ್ಯೆಯನ್ನು ಅನುಸರಿಸಿ, ಹ್ರಸ್ವ ದೀರ್ಘಾಕ್ಷರಗಳ ಬಗೆಬಗೆಯ ಗಣಿತ ಗುಣಿತಗಳಿಂದಾಗಿ, ಬಹುಸಂಖ್ಯೆಯ ವೃತ್ತಭೇದಗಳು ಹೊರಡುತ್ತವೆ.  ಇಂಥ ವರ್ಣವೃತ್ತಗಳ ಸಾಧಾರಣ ಲಕ್ಷಣ ಹೀಗೆ; ನಾಲ್ಕು ಪಾದಗಳು; ಪ್ರತಿಪಾದದಲ್ಲಿಯೂ ನಿರ್ದಿಷ್ಟವಾದ ಅಕ್ಷರಸಂಖ್ಯೆ; ಆ ಅಕ್ಷರಗಳು ಲಘುವೊ ಗುರುವೊ ಆಗಿದ್ದು ನಿರ್ದಿಷ್ಟವಾದ ಆ ಲಘುಗುರುಗಳ ವಿನ್ಯಾಸ.  ಪ್ರತಿಯೊಂದು ವೃತ್ತಭೇದದಲ್ಲಿಯೂ ಈ ಸಾಮಾನ್ಯಲಕ್ಷಣವನ್ನು ಅನುಸರಿಸಿ ಅಕ್ಷರಸಂಖ್ಯೆಯಲ್ಲಿಯೂ ಲಘುಗುರುವಿನ್ಯಾಸದಲ್ಲಿಯೂ ವಿಶಿಷ್ಟಲಕ್ಷಣ ಗೋಚರಿಸುತ್ತದೆ.  ಅದನ್ನು ಗುರುತಿಸುವುದಕ್ಕೆ ಅಕ್ಷರಗಣ ಅಥವಾ ವರ್ಣಗಣ ಎಂಬ ಗಣವಿಭಜನೆಯ ಕ್ರಮವನ್ನು ಅನುಸರಿಸಲಾಗುತ್ತದೆ.  ಅಕ್ಷರಗಣ ಎನ್ನುವುದಕ್ಕಿಂತ ವರ್ಣಗಣ ಎಂಬ ಮಾತೇ ಹೆಚ್ಚು ರೂಢಿಯಾದುದು.

 ಬೇರೆ ಬೇರೆ ವರ್ಣವೃತ್ತಗಳಲ್ಲಿ ಕಂಡುಬರುವ ಹ್ರಸ್ವ ದೀರ್ಘಾಕ್ಷರಗಳ ಸಂಖ್ಯೆಯನ್ನೂ ಅವುಗಳ ಸರಣಿಯನ್ನೂ ಕಂಡುಹಿಡಿದು ಗುರುತಿಟ್ಟುಕೊಳ್ಳಲು ಛಂದಶ್ಯಾಸ್ತ್ರಕಾರರು ನಡೆಸಿದ ಪ್ರಯತ್ನವೇ ಅಕ್ಷರ (ವರ್ಣ)ಗಣದ ಹುಟ್ಟಿಗೆ ಕಾರಣವಾಯಿತು.  ಮೊದಮೊದಲು ಅನುಸರಿಸಿದ ಕೆಲವು ಪ್ರಸ್ತಾರವಿಧಾನಗಳಲ್ಲಿ ಅಷ್ಟು ಸೌಕರ್ಯವಾಗಲಿ ಲಯದ ಮೌಲಿಕ ಅಂಶಗಳನ್ನು ಪೂರ್ತಿಯಾಗಿ ಗುರುತಿಸುವ ಸೌಲಭ್ಯವಾಗಲಿ ಇಲ್ಲದೆ ಹೋದುದರಿಂದ, ಹೊಸದೊಂದು ಗಣನಾಂಗವನ್ನು ಕಲ್ಪಿಸಿಕೊಳ್ಳಲಾಯಿತು.

 ಪ್ರಾಚೀನ ಭಾರತದಲ್ಲಿ ಮೂರರ ಸಂಖ್ಯೆ ದೊಡ್ಡದರಲ್ಲಿ ಅತಿ ಚಿಕ್ಕದೂ ಚಿಕ್ಕದರಲ್ಲಿ ಅತಿ ದೊಡ್ಡದೂ ಆಗಿ ಗ್ರಹಿಸಲ್ಪಟ್ಟಿದ್ದಿತು.  ಅದು ವೃದ್ಧಿಂಗತ ಸಂಕೀರ್ಣತೆಗೆ ಅತಿ ಚಿಕ್ಕ ಘಟಕವಾಗಿ ಅಂಗೀಕೃತವಾಗಿದ್ದಿತು.  ಗುಣ (ತ್ರಯ), ಅವಸ್ಥಾ (ತ್ರಯ), ಕಾಲ (ತ್ರಯ), ಲೋಕ (ತ್ರಯ), ತ್ರಿ (ಸ್ಥಾಯಿ) - ಈ ಮೊದಲಾಗಿ ಹಲವು ಪರಿಸ್ಥಿತಿಗಳಲ್ಲಿ ಮೂರರ ಸಂಖ್ಯೆ ಮೇಲು ಕೆಳಗಿನ ಎಲ್ಲ ಸ್ಥಿತ್ಯಂತರಗಳನ್ನೂ ತೋರಿಸಲು ತಕ್ಕ ಅಡಕವಾದ ಸಂಖ್ಯೆಯಾಗಿದ್ದಿತು.  ಪಾಣಿನಿಯ ಪ್ರಕಾರ ಬಹುತ್ವವನ್ನು ಸಂಘಟಿಸುವ ಅತಿ ಚಿಕ್ಕ ಸಂಖ್ಯೆಯೆಂದರೆ ಮೂರು.  ಆದ್ದರಿಂದ ಶಾಸ್ತ್ರನಿಯಮ ದೃಷ್ಟಿಯಿಂದಲೂ ಸೌಕರ್ಯದೃಷ್ಟಿಯಿಂದಲೂ ತ್ರಿಕವೆಂದು ಹೇಳಬಹುದಾದ  ಮೂರಕ್ಷರಗಳ ಒಂದು ಹೊಸ ಗಣನಾಂಗ ಕಾಣಿಸಿಕೊಂಡಿತು.  ಹೀಗೆಂಬುದು ವಿದ್ವಾಂಸರ ಗ್ರಹಿಕೆಯಾಗಿದೆ.

 ಹೀಗೆ ವೃತ್ತಪಾದವನ್ನು ಮೂರು ಮೂರು ಅಕ್ಷರಗಳಿಗೆ (ತ್ರಿಕಗಳಿಗೆ) ಒಂದೊಂದು ಗಣದಂತೆ ವಿಭಜಿಸುವ ಪದ್ಧತಿ ರೂಢಿಯಾಗಿದೆ.  ಈ ಪದ್ಧತಿಯಲ್ಲಿ ವರ್ಣವೃತ್ತಗಳ ಬಗೆಬಗೆಯಾದ ಹ್ರಸ್ವದೀರ್ಘಾಕ್ಷರವಿನ್ಯಾಸಗಳ ಎಂಟು ವಿಭಿನ್ನ ರೀತಿಯ ಲಯಗಳನ್ನು (ವರ್ಣಮಾತ್ರಾವಿನ್ಯಾಸಗಳನ್ನು) ಗುರುತಿಸುವುದು ಸಾಧ್ಯ.  ಮೂರು ಗುರುಗಳಿಂದ ಹಿಡಿದು ಮೂರು ಲಘುಗಳವರೆಗೆ ಇದರ ವ್ಯಾಪ್ತಿಯಿದೆ.  ಈ ವಿನ್ಯಾಸಗಳನ್ನು ವಿವಿಧಪ್ರಸ್ತಾರಕ್ರಮಗಳಲ್ಲಿ ಛಂದೋಗ್ರಂಥಗಳಲ್ಲಿ ಗುರುತಿಸಿದೆ.  ಇವುಗಳಿಗೆ ಪೃಥಿವಿ, ಅಪ್ಪು, ತೇಜಸ್ಸು, ವಾಯು, ಆಕಾಶ, ಸೂರ್ಯ, ಚಂದ್ರ, ಸ್ವರ್ಗ-ಎಂಬವು ಸಂಕೇತಗಳು; ಮ-ಯ-ರ-ಸ-ತ-ಜ-ಭ-ನ ಎಂಬವು ಸಂಜ್ಞೆಗಳು.  ಹೀಗೆಯೇ ಲಘು ಗುರುಗಳಿಗೆ ಹರಿ ಮತ್ತು ಹರ ಎಂಬವು ಸಂಕೇತಗಳು: ಲ-ಗ ಎಂಬವು ಸಂಜ್ಞೆಗಳು.  ಸಂಕೇತಗಳಿಗೆ ಪರ್ಯಾಯವಾಚಕಗಳನ್ನು ಬಳಸುವುದು ಸಾಮಾನ್ಯ; ಆದರೆ ಸಂಜ್ಞೆಗಳು ಸ್ಥಾಯಿಯಾದುವು.  ಹೀಗೆ ಅಕ್ಷರ (ವರ್ಣ) ಗಣಗಳು ಎಂಟು ವಿಧಗಳು; ಮಗಣ(---), ಯಗಣ (‰--), ರಗಣ(-‰-), sಸಗಣ (‰‰-) ತಗಣ (--‰)ಜಗಣ (‰-‰) ಭಗಣ(-‰‰)ನಗಣ (‰‰‰).

 ಸಂದರ್ಭಕ್ಕೆ ತಕ್ಕಂತೆ ಮಕಾರ ಮೊದಲಾದ ಎಂಟು ಸಂಜ್ಞೆಗಳಲ್ಲಿ ಅವಶ್ಯಕವಾದವನ್ನು ಅಡಕವಾಗಿ ಸೂಚಿಸುವುದರಿಂದಲೋ ಲಕ್ಷಣ - ಲಕ್ಷ್ಯ ವಿಧಾನದಲ್ಲಿ ಸೂತ್ರರೂಪವಾಗಿ ಹೆಣೆದಿರುವುದರಿಂದಲೋ ಛಂದೋಗ್ರಂಥಗಳಲ್ಲಿ ಆಯಾ ವರ್ಣವೃತ್ತಗಳ ಲಕ್ಷಣಗಳನ್ನು ವಿವರಿಸಿರುತ್ತದೆ.  ಅವು ನಿರ್ದೇಶಿಸುವ ಗುರುಲಘುವಿನ್ಯಾಸಗಳನ್ನು ನೆನಪಿಟ್ಟುಕೊಳ್ಳಲು ಸಂಸ್ಕøತದಲ್ಲಿಯೂ ಕನ್ನಡದಲ್ಲಿಯೂ ಛಂದಶ್ಯಾಸ್ತ್ರಕಾರರು ಕೆಲವು ನೆನಪಿನ ಪದ್ಯಗಳನ್ನು ಕಟ್ಟಿರುತ್ತಾರೆ.  ಸಂಸ್ಕøತದಲ್ಲಿ ರೂಢಿಯಾಗಿರುವ ಪದ್ಯಗಳಲ್ಲಿ ಒಂದು ಶ್ಲೋಕ ಹೀಗಿದೆ:

 ಆದಿಮಧ್ಯಾವಸಾನೇಷು ಯರತಾ ಯಾನ್ತಿ ಲಾಘವಮ್|

 ಭಜಸಾ ಗೌರವಂ ಯಾಂತಿ ಮನೌತು ಗುರುಲಾಘವಮ್||

 

ಕನ್ನಡದಲ್ಲಿ ಬಳಕೆಯಾಗಿರುವ ಒಂದು ಪದ್ಯ ಹೀಗಿದೆ:

 ಗುರು ಲಘು ಮೂರಿರೆ ಮನಗಣ

 ಗುರು ಲಘು ಮೊದಲಲ್ಲಿ ಬರಲು ಭಯಗಣಮಕ್ಕುಂ||  

ಗುರು ಲಘು ನಡುವಿರೆ ಜರಗಣ

 ಗುರು ಲಘು ಕಡೆಯಲ್ಲಿ ಬರಲು ಸತಗಣಮಕ್ಕುಂ||

 ಇವು ಮಾತ್ರವಲ್ಲದೆ, `ಯಮಾತಾರಾಜಭಾನಸಲಗಂ` ಎಂಬ ಒಂದು ಸರಳ ಸೂತ್ರದಿಂದಲೂ ಗುರುಲಘುವಿನ್ಯಾಸಗಳನ್ನು ಗುರುತಿಸುವುದುಂಟು.  ಇಲ್ಲಿ ಯಮಾತಾ (‰--) ಮಾತಾರಾ (- - -) ಎಂದು ಮುಂತಾಗಿ ತ್ರಿಕಗಳನ್ನು ವಿಂಗಡಿಸಿಕೊಂಡರೆ, ಮೊದಲನೆಯ ಅಕ್ಷರ ಗಣದ ಹೆಸರನ್ನು ಸೂಚಿಸುತ್ತದೆ.  ಯಮಾತಾ ಯಗಣ, ಮಾತಾರಾ ಮಗಣ, ತಾರಾಜ ತಗಣ, ರಾಜಧಾ ರಗಣ, ಜಭಾನ ಜಗಣ, ಭಾನಸ ಭಗಣ, ನಸಲ ನಗಣ, ಸಲಗಂ ಸಗಣ - ಹೀಗೆ.

 ಈಗ, ವರ್ಣವೃತ್ತವೊಂದರಲ್ಲಿ ಅಕ್ಷರ (ವರ್ಣ)ಗಣಗಳನ್ನು ವಿಭಜಿಸಿ ವೃತ್ತ ಭೇದವಾವುದೆಂದು ತಿಳಿಯುವುದಕ್ಕೆ ಒಂದು ನಿದರ್ಶನವನ್ನು ಕೊಡಬಹುದು: ಚಲದೊಳ್ ದುರ್ಯೋಧನಂ ನನ್ನಿಯಳಿನತನಯಂ ಗಂಡಿನೊಳ್ ಭೀಮಸೇನಂ | - ಇದು ಸಮಚತುಷ್ಟದಿಯೊಂದರ ಮೊದಲನೆಯ ಪಾದ. ಇದನ್ನು ಪ್ರಸಾರಿಸಿದರೆ, ಎಂದರೆ ಇಲ್ಲಿಯ ಗುರುಲಘುವಿನ್ಯಾಸವನ್ನು ಗುರುತಿಸಿದರೆ, ಆಗ ಹೀಗಿರುತ್ತದೆ;

ಚ‰ಲ‰ದೊŠಳ್ ದುŠಯೊರ್Šೀz‰sÀನಂŠ ನŠನ್ನಿ‰ ಯೊ‰ಳಿ‰£‰Àತ‰£‰ÀಯಂŠ ಗಂŠಡಿ‰ನೊŠಳ್ ಭೀŠಮ‰ಸೇŠನಂŠ.

ಬಳಿಕ ಮೂರು ಮೂರು ಅಕ್ಷರಗಳಿಗೆ ಒಂದೊಂದು ಗಣವಾಗಿ ಪಾದವನ್ನು ವಿಭಜಿಸಿದರೆ ಹೀಗಾಗುತ್ತದೆ.

ಚ‰ಲ‰ದೊŠಳ್ |  ದುŠಯೊರ್Šೀz‰sÀ | ನಂŠ ನŠನ್ನಿ‰ | ಯೊ‰ಳಿ‰£‰À | ತ‰£‰ÀಯಂŠ | ಗಂŠಡಿ‰ನೊŠಳ್ | ಭೀŠಮ‰ಸೇŠ | ನಂŠ.

ಮೇಲಿನ ಜ್ಞಾಪಕಪದ್ಯಗಳ ಅಥವಾ ಸೂತ್ರದ ನೆರವಿನಿಂದ ಪರಿಶೀಲಿಸಿದಾಗ ಇಲ್ಲಿರುವ ಅಕ್ಷರ (ವರ್ಣ) ಗಣಗಳು ಸ-ತ-ತ-ನ-ಸ-ರ-ರ-ಗ ಎಂಬುದಾಗಿ ತಿಳಿಯುತ್ತದೆ.  ಇಂಥ ವಿನ್ಯಾಸವಿರುವ ವೃತ್ತಭೇದ ಮಹಾಸ್ರಗ್ಧರಾ ಎಂಬ ಹೆಸರಿನಿಂದ ಛಂದೋಗ್ರಂಥಗಳಲ್ಲಿ ನಿರ್ದೇಶಿತವಾಗಿರುತ್ತದೆ.  (ಒಮ್ಮೊಮ್ಮೆ ಒಂದೇ ವೃತ್ತ ಬೇರೆ ಬೇರೆ ಹೆಸರುಗಳಿಂದ ಪ್ರಸಿದ್ಧವಾಗಿರುವುದೂ ಉಂಟು).  ಸೂತ್ರಬದ್ಧವಾದ ವಾಕ್ಯಗಳಿಂದ ವೃತ್ತಗಳ ಹೆಸರುಗಳನ್ನು ನಮ್ಮ ನೆನಪಿನಲ್ಲಿಟ್ಟುಕೊಂಡಿದ್ದರೆ ವೃತ್ತಭೇದವಾವುದೆಂಬುದು ಕೂಡಲೇ ಹೊಳೆಯುತ್ತದೆ.  ಉದಾ-ಸತತಂನಂಸಂರರಂಗಂ ನೆರೆದೆಸೆಯೆ ಮಹಾಸ್ರಗ್ಧರಾವೃತ್ತಮಕ್ಕುಂ.  ಇದು ಆ ವೃತ್ತವನ್ನು ನಮ್ಮ ನೆನಪಿಗೆ ತರುತ್ತದಲ್ಲದೆ ಅದರ ನಡೆಯನ್ನೂ ತಿಳಿಸುತ್ತದೆ.

 ಅಕ್ಷರ(ವರ್ಣ) ಗಣ ವಿಭಜನೆಯೆಂಬುದು ಬಹುಸಂಖ್ಯೆಯ ವರ್ಣವೃತ್ತಗಳಲ್ಲಿ 
ಒಂದೊಂದರ ಪ್ರಸ್ತಾರವನ್ನೂ ಲಕ್ಷಣವನ್ನೂ ಕಂಡುಹಿಡಿದು ಸೂತ್ರೀಕರಿಸುವುದಕ್ಕೆ ಮಾಡಿಕೊಂಡ ಒಂದು ಬಗೆಯ ಕೃತಕಶಾಸ್ತ್ರವ್ಯವಸ್ಥೆ.  ಮಾತ್ರಾಗಣ ಮತ್ತು ಅಂಶಗಣಗಳಲ್ಲಿ ಸಾಮಾನ್ಯವಾಗಿ ತೋರುವಂತೆ ಇಲ್ಲಿ ವೃತ್ತಲಯಕ್ಕೂ ಗಣವಿಭಜನೆಗೂ ಆತ್ಮೀಯ ಸಂಬಂಧವೇನೂ ತೋರುವುದಿಲ್ಲ.  ಇದಕ್ಕೆ ಮೇಲಿನ ಉದಾಹರಣೆಯನ್ನು ಪರಿಶೀಲಿಸಿದರೆ ಸಾಕು.  ಕೆಲವು ಬಾರಿ ಮಾತ್ರಾಗಣದ ಧಾಟಿ ಎದ್ದು ಕಾಣುವ ಕೆಲವು ವರ್ಣವೃತ್ತಗಳಲ್ಲಿ ಅಕ್ಷರ (ವರ್ಣ) ಗಣ ವಿಭಜನೆಯೆಂಬುದು ತೀರ ಕೃತಕವಾಗಿ ತೋರುತ್ತದೆ (ಉದ-ತರಳ, ಮಲ್ಲಿಕಮಾಲೆ ಇತ್ಯಾದಿ.)  ಹಾಗೆಯೇ ಆದಿಯ ಅಲ್ಪವ್ಯತ್ಯಾಸದ ಹೊರತು ಒಂದೇ ವಿಧವಾದ ಗುರುಲಘುವಿನ್ಯಾಸವಿರುವ ಕೆಲವು ವರ್ಣವೃತ್ತಗಳು ಅಕ್ಷರ(ವರ್ಣ) ಗಣಗಳಿಂದ ವಿಭಜಿತವಾದಾಗ ಒಂದಕ್ಕೊಂದಕ್ಕೆ ಎಷ್ಟೋ ಅಂತರವಿರುವಂತೆ ಭಾಸವಾಗುತ್ತದೆ.  ಅಂದರೆ ಉತ್ಪಲಮಾಲೆಯ ಮೊದಲ ಗುರುವನ್ನು ಒಡೆದು ಎರಡು ಲಘುಗಳಾಗಿ ಮಾಡಿದರೆ ಅದೇ ವೃತ್ತ ಚಂಪಕಮಾಲೆಯಾಗುತ್ತದೆ.  ಸ್ರಗ್ಧರೆ ಮಹಾಸ್ರಗ್ಧರೆ, ಶಾರ್ದೂಲವಿಕ್ರೀಡಿತ ಮತ್ತೇಭವಿಕ್ರೀಡಿತ ವೃತ್ತಗಳ ಮಧ್ಯದ ವ್ಯತ್ಯಾಸವೂ ಇಷ್ಟೆ.  ಆದ್ದರಿಂದ ಅಕ್ಷರಗಣವೆಂಬುದು ವರ್ಣ ವೃತ್ತದ ಪ್ರಸ್ತಾರಕ್ಕಾಗಿಯೂ ವೃತ್ತಭೇದದ ಪರಿಜ್ಞಾನಕ್ಕಾಗಿಯೂ ಮಾಡಿಕೊಂಡ ಒಂದು ಹೊರಗಿನ ವ್ಯವಸ್ಥೆ ಮಾತ್ರ ಎಂಬುದನ್ನು ನೆನಪಿನಲ್ಲಿಡಬೇಕು.

(ಟಿ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ